ಚಾಪೆಹೆಣಿಗೆ-
ಅತಿ ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿರುವ ಗುಡಿ ಕೈಗಾರಿಕೆಗಳಲ್ಲಿ ಚಾಪೆ ಹೆಣಿಗೆಯೂ ಒಂದು. ಎಲ್ಲ ದೇಶದ ಆದಿವಾಸಿಗಳೂ ಇದನ್ನು ಅವಲಂಬಿಸಿದ್ದರು. ಈಗಲೂ ನೀಗ್ರೊಗಳು, ರೆಡ್ ಇಂಡಿಯನ್ನರು, ಭಾರತದಲ್ಲಿನ ಆದಿವಾಸಿಗಳು ಇದರಿಂದಲೇ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಅತಿ ಹಳೆಯ ಉದ್ಯಮವಾದರೂ ಇದು ಇಂದು ನಶಿಸಿಲ್ಲ. ಬಡವರಿಗೆ ಅಗತ್ಯದ ವಸ್ತುವಾಗಿ, ಶ್ರೀಮಂತರಿಗೆ ಭೋಗದ ವಸ್ತುವಾಗಿ ಚಾಪೆ ಮುಂದುವರಿಯುತ್ತಲೇ ಇದೆ.

ಈ ಕೈಗಾರಿಕೆ ಕರ್ನಾಟಕ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಬಂಗಾಳ ಮುಂತಾದ ರಾಜ್ಯಗಳಲ್ಲಿ ಊರ್ಜಿತಾವಸ್ಥೆಯಲ್ಲಿದೆ. ಕರ್ನಾಟಕದ ಕಡಕೊಳ, ಸೋಮೇಶ್ವರಪುರ, ಚಿಕ್ಕಜೋಗಿಹಳ್ಳಿ ಹಾಗೂ ಇನ್ನಿತರ ಕಡೆಗಳಲ್ಲಿ ಚಾಪೆಗಳನ್ನು ವಿಶೇಷವಾಗಿ ತಯಾರಿಸುತ್ತಾರೆ.

ಚಾಪೆಗಳನ್ನು ಬಿದಿರು, ಕಡ್ಡಿಹುಲ್ಲು, ಈಚಲಗರಿ, ತೆಂಗಿನಗರಿ ಮತ್ತು ಓಲೆಗರಿಗಳಿಂದ ನೇಯುವರು, ಹಾಸುವ ಚಾಪೆ, ಪಂಕ್ತಿ ಚಾಪೆ, ಮೇಜುಗಳ ಮೇಲೆ ಹಾಸುವ ಚಾಪೆ, ಬಾಗಿಲಿಗೆ ಹಾಕುವ ಚಾಪೆಯ ಪರದೆಗಳು ಇತ್ಯಾದಿಯಾಗಿ ಚಾಪೆಯಲ್ಲಿ ಬಹು ನಮೂನೆಗಳಿವೆ. ಚಾಪೆಯಿಂದ ಹಣದ ಚೀಲ, ಹ್ಯಾಟುಗಳು, ಕೈಚೀಲ ಮುಂತಾದ ನಯ ನಾಜೂಕಿನ ಬಣ್ಣಬಣ್ಣಗಳಿಂದ ಅಲಂಕೃತವಾದ ದೈನಿಕ ಉಪಯೋಗದ ವಸ್ತುಗಳನ್ನೂ ತಯಾರಿಸುತ್ತಾರೆ, ಸಾಧಾರಣ ತರದ ಈಚಲ ಚಾಪೆಯನ್ನು ಅನೇಕ ವಸ್ತುಗಳು ಕಟ್ಟಲು ಹೇರಳವಾಗಿ ಉಪಯೋಗಿಸುವರು. ನಿಜಕ್ಕೂ ಚಾಪೆ ಜಮಖಾನೆಗಿಂತ ಉತ್ತಮ. ಬೆಲೆ ಕಡಿಮೆ. ಬೇಗ ಮಾಸುವುದಿಲ್ಲ. ತೊಳೆಯುವುದು ಸುಲಭ. ಶೀತವನ್ನು ಹೀರದು.

ಈ ಕೈಗಾರಿಕೆಗೆ ಬೇಕಾಗುವ ಉಪಕರಣಗಳೆಂದರೆ ಮಗ್ಗ, ಬಿದಿರು ಸಲಾಕೆಗಳು ಮತ್ತು ಮೇಲೆ ಹೇಳಿದ ಹುಲ್ಲು ಇತ್ಯಾದಿ ಕಚ್ಚಾ ಸಾಮಗ್ರಿಗಳು, ಚಾಪೆಯ ಅಂದ ಅದರ ಮೂಲವಸ್ತು, ವಿಶಿಷ್ಟವಾದ ನೇಯ್ಗೆ ಮತ್ತು ಬಣ್ಣಗಳ ಸಂಕಲನಗಳಲ್ಲಿದೆ. ಬೇಕಾದ ಚಿತ್ರಗಳನ್ನು ನೇಯ್ಗೆ ಮತ್ತು ಬಣ್ಣಗಳಿಂದ ಚಾಪೆಯ ಮೇಲೆ ಮೂಡಿಸಬಹುದು.

ಚಾಪೆಗೆ ಬೇಕಾದ ಕಚ್ಚಾ ಸಾಮಗ್ರಿಗಳು ಕಡಿಮೆ ಕ್ರಯದಲ್ಲಿ ಬೇಕಾದಷ್ಟು ಸಿಗುವುದರಿಂದ ಮತ್ತು ಮನೆ ಜನರೆಲ್ಲ ಕೆಲಸಮಾಡುವುದರಿಂದ ಇದನ್ನೇ ನಂಬಿದವರ ಜೀವನ ನಡೆಯುತ್ತಿದೆ. ಇದು ಇತರ ಸಣ್ಣ ಕೈಗಾರಿಕೆಗಳಂತೆ ವಂಶಪಾರಂಪರ್ಯವಾಗಿ ನಡೆದು ಬಂದಿರುವಂಥದು. ಆದರೆ ಚಾಪೆಗಳಿಗೆ ಸುವ್ಯವಸ್ಥಿತವಾದ ಮಾರುಕಟ್ಟೆಯ ಅಭಾವವಿರುವುದರಿಂದ ಲಾಭದ ದೊಡ್ಡ ಅಂಶ ಮಧ್ಯವರ್ತಿ ವ್ಯಾಪಾರಿಗಳ ಕೈವಶವಾಗಿ ಕೈಗಾರಿಕೆಯಲ್ಲಿ ತೊಡಗಿದವರಿಗೆ ಸಮರ್ಪಕವಾದ ಮತ್ತು ಪರಿಪೂರ್ಣವಾದ ಪ್ರತಿಫಲ ದೊರೆಯುತ್ತಿಲ್ಲ.

ಈ ಕೈಗಾರಿಕೆಯನ್ನು ಅವಲಂಬಿಸಿದ ಜನ ತಮ್ಮದೇ ಆದ ಸಹಕಾರ ಸಂಘಗಳನ್ನು ಸ್ಥಾಪಿಸಿ ಆ ಸಂಘಗಳ ಮೂಲಕ ತಮಗೆ ಅವಶ್ಯಕವಾದ ಕಚ್ಚಾ ಸಾಮಗ್ರಿಗಳನ್ನು ಕೊಳ್ಳುವುದು ಮತ್ತು ತಾವು ಹೆಣೆದ ಚಾಪೆಗಳನ್ನು ಮಾರುವುದರ ಮೂಲದ ಯುಕ್ತ ಲಾಭ ಪಡೆಯಬಹುದು. 

ಜಪಾನ್ ಮೊದಲಾದ ದೇಶಗಳಲ್ಲಿ ಬಹು ಅಂದವಾಗಿ ಚಾಪೆ ಹೆಣೆದು ಅದರ ಮೇಲೆ ಕಲಾತ್ಮಕವಾದ ಚಿತ್ರಗಳನ್ನು ಅಚ್ಚು ಒತ್ತುತ್ತಾರೆ. ಇಂಥ ಚಾಪೆಗಳಿಗೆ ಪ್ರಪಂಚಾದ್ಯಂತ ಬೇಡಿಕೆ ಇದೆ. ಈಚೆಗೆ ಕೇರಳದಲ್ಲಿ ಇದೇ ಮಟ್ಟದ ಸುಂದರ ಚಾಪೆಗಳನ್ನು ತಯಾರಿಸುತ್ತಿದ್ದಾರೆ. ಚಾಪೆ ಹೆಣಿಗೆ ಮೊದಲಾದ ಕೈಗಾರಿಕೆಗಳಿಗೆ ಈಚೆಗೆ ಭಾರತ ಸರ್ಕಾರ ಉದಾರ ಸಹಾಯ, ಪ್ರೋತ್ಸಾಹ ನೀಡುತ್ತಿದೆ.											(ಪಿ.ಸಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ